ನಿರೋಧ -
	ಮನಶ್ಯಾಸ್ತ್ರದಲ್ಲಿ ಬಳಕೆಯಲ್ಲಿರುವ ಒಂದು ಪಾರಿಭಾಷಿಕ ಪದ. ವಿಶಾಲರ್ಥದಲ್ಲಿ ಇದಕ್ಕೆ ಚೋದಕಗಳನ್ನು ಅಥವಾ ಆವೇಗಗಳನ್ನು ತಡೆದು ನಿಯಂತ್ರಿಸುವುದು ಎಂದು ಅರ್ಥ. ಫ್ರಾಯ್ಡ್ ಇದನ್ನು ವ್ಯಕ್ತಿತ್ವದ ಒಂದು ರಕ್ಷಣಾತಂತ್ರವೆಂದು ಕರೆದಿದ್ದಾನೆ. ಪ್ರತಿಯೊಬ್ಬನೂ ತನ್ನ ಆದರ್ಶ ಅಹಮಿಗೆ (ಸೂಪರ್ ಈಗೊ) ಅಹಿತವಾದುದನ್ನು ನಾನಾ ವಿಧಾನಗಳಿಂದ ತನ್ನ ಪ್ರಜೆಯಿಂದ ಹೊರಗಿಡಲು ಪ್ರಯತ್ನ ಮಾಡುತ್ತಾನೆ.  ಅಂಥ ವಿಧಾನಗಳಲ್ಲಿ ನಿರೋಧವೂ ಒಂದು. ಸಾಧಾರಣ ನಿರೋಧ ರೋಗದ ಸಂಕೇತವಲ್ಲ. ಸಾಧಾರಣ ನಿರೋಧಕ್ಕೂ ಲಘು ಮನೋರೋಗ ನಿರೋಧಕ್ಕೂ ವ್ಯತ್ಯಾಸವಿದೆ. ಸಾಮಾನ್ಯ ನಿರೋಧದಲ್ಲಿ ಪ್ರತಿಕ್ರಿಯೆ ವಿವೇಚನಾಪೂರ್ಣವಾಗಿರುತ್ತದೆ. ಆದರೆ, ಲಘು ಮನೋರೋಗದ ಪ್ರತಿಕ್ರಿಯೆ ವಿವೇಚನೆಯಿಂದ ಕೂಡಿರುವುದಿಲ್ಲ. ಉದಾಹರಣೆಗೆ: ಒಬ್ಬ ಭಯಗ್ರಸ್ಥ ಮನುಷ್ಯನ ಪ್ರತಿಕ್ರಿಯೆ ವಿಶಿಷ್ಟ ಪ್ರಚೋದನೆಗೂ ಇತರ ಪ್ರಚೋದನೆಗೂ ವ್ಯತ್ಯಾಸ ತೋರುವುದಿಲ್ಲ. ಒಬ್ಬನ ವ್ಯಕ್ತಿತ್ವದಲ್ಲಿ ನಿರೋಧ ಸಾಧಾರಣವಾದರೆ, ಅದು ವಿಷಣ್ಣತೆಯ ಗುರುತು. ನಿರೋಧ ಒಂದು ಮಾನಸಿಕ ಚಟುವಟಿಕೆ. ಇದು ಪ್ರಜ್ಞೆಗೆ ಬೇಡವಾದ ಚೇದಕಗಳನ್ನು ಅಥವಾ ಆವೇಗಗಳನ್ನು ನಿಯಂತ್ರಿಸುತ್ತದೆ ಎಂದು ಹೇಳಿದೆಯಷ್ಟೇ ಸಂಕೇತವಾಗುವುದು ಒಂದು ವಿಧಾನ. ಈ ವಿಧಾನದಿಂದಲೇ ಅಹಿತವಾದ ಚೋದಕಗಳು ಮತ್ತು ಆವೇಗಗಳು ಪ್ರಜ್ಞೆಯನ್ನು ಬೇರೆ ರೂಪದಲ್ಲಿ (ಸಂಕೇತ) ಪ್ರವೇಶಿಸುತ್ತವೆ. ಲಘು ಮನೋರೋಗದಲ್ಲಿ ಉಂಟಾದ ನಿರೋಧದಲ್ಲಿ ಅಥವಾ ರಕ್ಷಣಾ ನಿರೋಧದಲ್ಲಿ ಕಾರ್ಯವಿಧಾನ ಒಂದೇ ಆದರೂ ಮೊದಲನೆಯದರಲ್ಲಿ ನಿರಂತರವಾದ ಒಳತೋಟಿಯುಂಟಾಗಿ ಚೋದಕವನ್ನು ಸತತವಾಗಿ ನಿಯಂತ್ರಿಸುವ ಮತ್ತು ನಿರೋಧಿಸುವ ಸ್ಥಿತಿಯುಂಟಾಗುತ್ತದೆ. ಇದು ವ್ಯಕ್ತಿತ್ವವನ್ನು ಸತತವಾದ ಬಿಗಿತಕ್ಕೆ ಈಡು ಮಾಡಿ ದಿನನಿತ್ಯದ ಬಾಳ್ವೆಗೆ ಫಲಕಾರಿಯಾಗಿ ಹೊಂದಿಕೊಂಡು ಹೋಗುವ ಶಕ್ತಿಯನ್ನು ಕುಗ್ಗಿಸುತ್ತದೆ. ಅತಿ ನಿರೋಧ ಒಬ್ಬನ ಅಭಿರುಚಿ ಮತ್ತು ಸಂವೇಗ  ಪ್ರತಿಕ್ರಿಯೆಗಳನ್ನು ಸೀಮಿತಗೊಳಿಸುತ್ತದೆ.  ಇದರ ಫಲ ಸಂಕುಚಿತ ವ್ಯಕ್ತಿತ್ವ.

	ನಿರೋಧ ಕಲ್ಪನೆಗೆ ಕಲಿಕೆಯ ಸಿದ್ಧಾಂತದಲ್ಲಿ ಮತ್ತು ಚಲನಾತ್ಮಕ ಮನಶ್ಯಾಸ್ತ್ರದಲ್ಲಿ ಒಂದು ದೊಡ್ಡ ಇತಿಹಾಸವಿದೆ. ಇತ್ತೀಚೆಗೆ ಈ ಎರಡೂ ಭಾಗಗಳೂ ಒಟ್ಟುಗೂಡುತ್ತಿರುವುದರ ಪರಿಣಾಮವಾಗಿ ನಿರೋಧವನ್ನು ಕಲಿಕೆ ಪ್ರೇರಣೆಯ ಚೌಕಟ್ಟಿನಲ್ಲಿ ಬಹಳವಾಗಿ ವರ್ಣಿಸಲಾಗಿದೆ. ಇದನ್ನು ಜೆ.ದೊಲ್ಲಾರ್ಡ್ ಮತ್ತು ಎಲ್.ಇ. ಮಿಲರ್ ಅವರ ಸಂಶೋಧನೆಯಲ್ಲಿ ನೋಡಬಹುದು.

	ನಿರೋಧದ ಪಾತ್ರವನ್ನು ಕಲಿಕೆಯಲ್ಲಿ, ವಿಸ್ಮøತಿಯಲ್ಲಿ ಮತ್ತು ತರಬೇತಿ ವರ್ಗಾವಣೆಯಲ್ಲಿ ಪ್ರಾಯೋಗಿಕ ಮನಶ್ಯಾಸ್ತ್ರಜ್ಞರು ಬಹಳ ಕಾಲದಿಂದ ಪರಿಶೀಲಿಸಿದ್ದಾರೆ. 

	ಅವರ ಸಂಶೋಧನೆ ಎರಡು ಮುಖ್ಯವಾದ ಸಮಸ್ಯೆಗಳಿಗೆ ಸಂಬಂಧಿಸಿದೆ. 1 ಅಗ್ರ ಲಕ್ಷ್ಯ ನಿರೋಧ, 2 ಪೂರ್ವ ಲಕ್ಷ್ಯ ನಿರೋಧ.

	ಅಗ್ರ ಲಕ್ಷ್ಯ ನಿರೋಧ ಎಂದರೆ, ಪದಗಳ ಎರಡು ಪಟ್ಟಿಯನ್ನು ಒಂದಾದ ಅನಂತರ ಮತ್ತೊಂದನ್ನು ಕಲಿತಾಗ ಮೊದಲನೆಯ ಕಲಿಕೆ ಎರಡನೆಯದನ್ನು ಕಲಿಯಲು ಅಡ್ಡಿ ಮಾಡುತ್ತದೆ. ಅಂದರೆ, ಮೊದಲ ಪಟ್ಟಿಯನ್ನು ಎರಡನೇ ಪಟ್ಟಿಗಿಂತ ಸುಲಭವಾಗಿ ಕಲಿಯಬಹುದು. ಎಷ್ಟೇ ಪಟ್ಟಿಗಳಿದ್ದರೂ ಅಗ್ರಲಕ್ಷ್ಯ ನಿರೋಧದಲ್ಲಿ ಇದೇ ರೀತಿ ಆಗುತ್ತದೆ.

	ಪೂರ್ವಲಕ್ಷ್ಯ ನಿರೋಧವೆಂದರೆ, ಎರಡು ಪಟ್ಟಿಗಳಲ್ಲಿ ಎರಡನೇ ಸಲ ಕಲಿತ ಪಟ್ಟಿಯನ್ನು ಜ್ಞಾಪಿಸಿಕೊಳ್ಳಲು ಅಡ್ಡಿ ಮಾಡುತ್ತದೆ.

	ಸಿ.ಜೆ. ಮಾರ್‍ಗನ್ ಹೇಳಿರುವಂತೆ ನಾವು ಕಲಿತದ್ದು ಹಿಂದೆ ಕಲಿತದ್ದನ್ನು ಜ್ಞಾಪಿಸಿಕೊಳ್ಳಲು ಅಡ್ಡಿ ಮಾಡುತ್ತದೆ. ಇಂಥ ನಿರೋಧಕ್ಕೆ ನಿಷೇಧಾತ್ಮಕ ವರ್ಗಾವಣೆ ಎಂದು ಹೆಸರು. ಇದು ವಿಸ್ಮøತಿಗೆ ಬಹುಮುಖ್ಯ ಕಾರಕ.

	ನಿರೋಧ ಮತ್ತು ಉದ್ರೇಕಗಳ ಬಗ್ಗೆ ಮೂಲಭೂತವಾಗಿ ವಿಷಯ ವಿಮರ್ಶೆ ಮಾಡಿರುವವನು ಪ್ಯಾವಲವ್. ಇವನ ವಾದವನ್ನು ಹಲ್, ಡಾಡ್ಜ್ ಮತ್ತು ಟೆಪ್‍ಲೋವರು ಸಮರ್ಥಿಸಿ ಸ್ಪಷ್ಟೀಕರಿಸಿದ್ದಾರೆ. 

	ನಿರೋಧ, ಎರಡು ಬಗೆಯಲ್ಲಿರಬಹುದು. ಮೊದಲನೆಯದನ್ನು ತಾತ್ಕಾಲಿಕ ನಿರೋಧ ಎನ್ನುತ್ತಾರೆ. ಇದನ್ನೇ ಪ್ಯಾವ್‍ಲವ್ ಆಂತರಿಕ ನಿರೋಧ ಎಂದಿದ್ದಾನೆ. ತಾತ್ಕಾಲಿಕ ನಿರೋಧ ಕೆಲಸದ ಒತ್ತಡ ಹೆಚ್ಚಾದಾಗ, ವಿಶ್ರಾಂತಿ ಇಲ್ಲದಾಗ ಉಂಟಾಗುತ್ತದೆ. ವಿಶ್ರಾಂತಿ ದೊರಕಿದಲ್ಲಿ ನಿರೋಧ ಮಾಯವಾಗಿ ಮನಸ್ಸು ತಿಳಿಯಾಗುತ್ತದೆ. 

	ಎರಡನೇ ಬಗೆಯ ನಿರೋಧವನ್ನು ದೇಶಿಕ ನಿರೋಧ ಎನ್ನಲಾಗಿದೆ. ಇದನ್ನು ಅವಧಾನ ವಿಕ್ಷೇಪ, ಬಾಹ್ಯ ನಿರೋಧ ಎಂದೂ ಕರೆಯುವುದಿದೆ. ಒಂದು ಸಂವೇದನೆಯನ್ನು ಅನುಭವಿಸುತ್ತಿರುವಾಗ ಮತ್ತೊಂದು ಸಂವೇದನೆ ಉದ್ಭವಿಸಿ ಪ್ರಚೋದಿಸತೊಡಗಿದಾಗ ಮೊದಲ ಸಂವೇದನೆ ಶಮನವಾಗಿ ಬಿಡುತ್ತದೆ. ಇದೇ ದೇಶಿಕ ನಿರೋಧ. ಬೆಂಡರನ ಪ್ರಯೋಗ (1952) ಇದನ್ನು ಚೆನ್ನಾಗಿ ಸ್ಪಷ್ಟಪಡಿಸುತ್ತದೆ.					
	(ಎಚ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ